ಬೆಳಗಾವಿ: ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿರುವ ಸುಮಾರು 4,500 ಕೋಟಿ ರೂಪಾಯಿ ವಂಚನೆ ಹಗರಣದ ಮುಖ್ಯ ಆರೋಪಿ (ಕಿಂಗ್‌ಪಿನ್) ಶಿವಾನಂದ ನೀಲಣ್ಣವರ್‌ನನ್ನು 10 ದಿನಗಳ ಕಾಲ ಸಿಐಡಿ (CID) ಕಸ್ಟಡಿಗೆ ಒಪ್ಪಿಸಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿರುವ ತನಿಖಾ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿದೆ. ಆರೋಪಿ ಶಿವಾನಂದ ನೀಲಣ್ಣವರ್ ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷ ಒಡ್ಡಿ ಸುಮಾರು 35,000 ಅಮಾಯಕ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲೇ ಬರೋಬ್ಬರಿ 1,000 ಕೋಟಿ ರೂಪಾಯಿಗೂ ಅಧಿಕ ನಗದು ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಗೆ ಕರೆದೊಯ್ದು ಹೂಡಿಕೆ ಮಾಡಲಾದ ಹಣ ಎಲ್ಲಿದೆ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಬೇಕಾಗಿರುವುದರಿಂದ 10 ದಿನಗಳ ಕಸ್ಟಡಿಗೆ ನೀಡುವಂತೆ ಸರ್ಕಾರಿ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ತೀವ್ರ ಹೈಡ್ರಾಮಾ ನಡೆದಿದೆ. ತನಗೆ ತೀವ್ರ ರಕ್ತದೊತ್ತಡ (BP) ಇದೆ ಎಂದು ಆರೋಪಿ ಹೇಳಿಕೊಂಡಾಗ, ಅಗತ್ಯ ವೈದ್ಯಕೀಯ ನೆರವು ನೀಡುವುದಾಗಿ ನ್ಯಾಯಾಧೀಶರು ತಿಳಿಸಿದರು. ಇದೇ ವೇಳೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸಿದ ಆರೋಪಿ ಶಿವಾನಂದ, “ಜನರಿಗೆ ನಾನೇ ಬೇಕಾಗಿದ್ದೇನೆ, ಹಣ ಬೇಕಿಲ್ಲ” ಎಂದು ಹೂಡಿಕೆದಾರರ ದಾರಿ ತಪ್ಪಿಸಲು ಸಮರ್ಥಿಸಿಕೊಳ್ಳಲು ಮುಂದಾದಾಗ ನ್ಯಾಯಾಧೀಶರು ಕಠಿಣ ತಪರಾಕಿ ನೀಡಿದ್ದಾರೆ.
ಮಾನ್ಯ ನ್ಯಾಯಾಧೀಶರ ಮಾರ್ಮಿಕ ನುಡಿ: “ಅಮಾಯಕ ಹೂಡಿಕೆದಾರರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ, ಪ್ರಜೆಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿ” ಎಂದು ಹೇಳಿದ ನ್ಯಾಯಾಧೀಶರು, ‘ಧರ್ಮೋ ರಕ್ಷತಿ ರಕ್ಷಿತಃ’ ಶ್ಲೋಕವನ್ನು ಉದಾಹರಿಸಿ ಆರೋಪಿಗೆ ಕಠಿಣ ಕಿವಿಮಾತು ಹೇಳಿದರು.
ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಆದೇಶಿಸುತ್ತಿದ್ದಂತೆ, ಇಷ್ಟು ದಿನ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣದಲ್ಲಿ ರಾಜಾರೋಷವಾಗಿ ಮೆರೆದಿದ್ದ ಶಿವಾನಂದ ನೀಲಣ್ಣವರ್ ಸಂಪೂರ್ಣ ನಡುಗಿಹೋಗಿದ್ದಾನೆ. ಕೋರ್ಟ್ ಹಾಲ್‌ನಿಂದ ಹೊರಗೆ ಬರುತ್ತಿದ್ದಂತೆ ಅಲ್ಲಿ ನಿಂತಿದ್ದ ತನ್ನ ಸಹೋದರನನ್ನು ಕಂಡು ಜೋರಾಗಿ ಕಣ್ಣೀರಿಟ್ಟಿದ್ದಾನೆ.
ಸದ್ಯಕ್ಕೆ ಆರೋಪಿಯ ಭದ್ರತೆ ಹಾಗೂ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸುವಂತೆ ನ್ಯಾಯಾಲಯವು ಸಿಐಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸದ್ಯದಲ್ಲೇ ಸಿಐಡಿ ಹಿರಿಯ ಅಧಿಕಾರಿಗಳ ತಂಡ ಈತನನ್ನು ಬೆಂಗಳೂರಿಗೆ ಕರೆದೊಯ್ದು ಬೃಹತ್ ವಂಚನೆಯ ಸಂಪೂರ್ಣ ಸೀಕ್ರೆಟ್ಸ್ ಹೊರಹಾಕಿಸಲಿದೆ.