ಕೆ.ಆರ್. ನಗರ: ಹಣದ ಆಸೆಗಾಗಿ ನಂಬಿಕಸ್ಥನೇ ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಶೌಚಾಲಯದ ಯುಜಿಡಿ (UGD) ಗುಂಡಿಯಲ್ಲಿ ಹೂತು ಹಾಕಿರುವ ಘನಘೋರ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗೌರಮ್ಮ (90) ಕೊಲೆಯಾದ ದುರ್ದೈವಿ. ಇದೇ ಗ್ರಾಮದ ವೀರಭದ್ರ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ.
ಮೃತ ಗೌರಮ್ಮ ಅವರೊಂದಿಗೆ ಆರೋಪಿ ವೀರಭದ್ರ ಬಹಳ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದನು. ವೃದ್ಧೆಯ ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಅವರ ವಿಶ್ವಾಸ ಗಳಿಸಿದ್ದನು. ಸುಮಾರು 15 ದಿನಗಳ ಹಿಂದೆ ಗೌರಮ್ಮ ಅವರು ಬ್ಯಾಂಕ್‌ನಿಂದ ₹75 ಸಾವಿರ ಹಣವನ್ನು ಡ್ರಾ ಮಾಡಲು ವೀರಭದ್ರ ಸಹಾಯ ಮಾಡಿದ್ದನು. ಈ ಸಂದರ್ಭದಲ್ಲಿ ಆ ಹಣದ ಮೇಲೆ ಕಣ್ಣು ಹಾಕಿದ ಆರೋಪಿ, ‘ಎರಡು ದಿನದಲ್ಲಿ ವಾಪಸ್ ನೀಡುತ್ತೇನೆ’ ಎಂದು ನಂಬಿಸಿ ಹಣ ಪಡೆದುಕೊಂಡಿದ್ದನು.
ವಾರ ಕಳೆದರೂ ಹಣ ನೀಡದಿದ್ದಾಗ ಗೌರಮ್ಮ ಅವರು ತಮ್ಮ ಹಣವನ್ನು ವಾಪಸ್ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ, ಗೌರಮ್ಮ ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಅವರ ಮೇಲೆರಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹಾಕಿ ಹೂತು ಹಾಕಿ ತಲೆಮರೆಸಿಕೊಂಡಿದ್ದನು.
ಕಳೆದ 15 ದಿನಗಳಿಂದ ಗೌರಮ್ಮ ಅವರು ಕಾಣದ ಹಿನ್ನೆಲೆಯಲ್ಲಿ ಅವರ ಮಕ್ಕಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ವೃದ್ಧೆಯ ಜೊತೆಗಿದ್ದ ವೀರಭದ್ರ ಕೂಡ ನಾಪತ್ತೆಯಾಗಿರುವುದು ಸಂಶಯ ಮೂಡಿಸಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿದಾಗ, ಆತ ತನ್ನ ಹಳೇ ಚಾಳಿಯನ್ನು ಬಿಚ್ಚಿಟ್ಟು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುಜಿಡಿ ಗುಂಡಿಯಿಂದ ವೃದ್ಧೆಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಕೆ.ಆರ್. ನಗರ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.