Skip to main content

Police Roundup

ಗಂಡ ಮನೆಯಲ್ಲಿದ್ದಾಗಲೇ ಪತ್ನಿ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ: ನಿರ್ಲಕ್ಷ್ಯವೇ ಜೀವಕ್ಕೆ ಮುಳುವಾಯಿತೇ?

Share News

ಬೆಂಗಳೂರು: ಮದುವೆಯಾಗಿ ಎಂಟೇ ತಿಂಗಳಿಗೆ ಸುಂದರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಯಶ್ವಂತಪುರದಲ್ಲಿ ನವವಿವಾಹಿತೆಯೊಬ್ಬರು ಗಂಡ ಮನೆಯಲ್ಲಿದ್ದಾಗಲೇ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.

 

ಮೃತ ಯುವತಿಯನ್ನು ಶಾರದಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಾರದಾ ಅವರು ಪತಿ ಮಹೇಶ್‌ಗೆ ವಿಡಿಯೋ ಕಾಲ್ ಮಾಡಿ, “ನಾನು ಸಾಯುತ್ತಿದ್ದೇನೆ” ಎಂದು ತಿಳಿಸಿದ್ದರು. ಆದರೆ, ಈ ಮಾತನ್ನು ಮಹೇಶ್ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ವಿಡಿಯೋ ಕಾಲ್ ನಡೆಯುತ್ತಿರುವಾಗಲೇ ಶಾರದಾ ನೇಣಿಗೆ ಶರಣಾಗಿದ್ದು, ಪತಿ ಮನೆಯಲ್ಲಿದ್ದರೂ ಈ ದುರಂತ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 

ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾರದಾ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. “ಮದುವೆಯಾದ ಆರಂಭದಿಂದಲೂ ಹಣಕ್ಕಾಗಿ ಶಾರದಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು. ಪತಿ ಮತ್ತು ಅವರ ಕುಟುಂಬದ ಕಿರುಕುಳವೇ ನನ್ನ ಮಗಳ ಸಾವಿಗೆ ಕಾರಣ” ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

 

ಈ ಸಂಬಂಧ ಯಶ್ವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಯ ಎಚ್ಚರಿಕೆ ನೀಡಿದರೂ ಪತಿ ಯಾಕೆ ಸುಮ್ಮನಿದ್ದರು? ಘಟನೆಯ ಹಿಂದೆ ವರದಕ್ಷಿಣೆ ಕಿರುಕುಳದ ನೈಜತೆ ಎಷ್ಟಿದೆ? ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

​ಮದುವೆಯಾದ ಕೆಲವೇ ತಿಂಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಸಮಾಜದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿವೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin